ನೆರ್ವಾಲ -
	ಕೆಪಾರಿಡೇಸೀ ಕುಟುಂಬಕ್ಕೆ ಸೇರಿದ ಒಂದು ವನ್ಯವೃಕ್ಷ. ಕ್ರಟೀವ ರಿಲಿಜಿಯೋಸ ಇದರ ವೈಜ್ಞಾನಿಕ ಹೆಸರು.

	ಭಾರತ, ವೆನಜ್ವೇಲ, ಚೀನ, ಫಾರ್ಮೋಸ, ಮಲಯ, ಆರ್ಕಿಪೆಲಾಗೊ, ಪಾಲಿನೇಶಿಯ ಮತ್ತು ಉಷ್ಣವಲಯದ ಆಫ್ರಿಕಗಳಲ್ಲೆಲ್ಲ ಇದರ ವ್ಯಾಪ್ತಿ ಉಂಟು. ನದಿದಂಡೆಗಳು ಇದರ ಅಚ್ಚುಮೆಚ್ಚಿನ ನೆಲೆಗಳು.

	ಇದು ಮಧ್ಯಮಗಾತ್ರಕ್ಕೆ ಬೆಳೆಯುವ ಮರ. ತೊಗಟೆ ಬೂದಿ ಬಣ್ಣದ್ದು. ಚೇಗುಮರದ ಬಣ್ಣ ಬಿಳಿಹಳದಿ. ಎಲೆಗಳು ಭಿನ್ನಪತ್ರ ಮಾದರಿಯವು; ರೆಂಬೆಗಳ ತುದಿಯಲ್ಲಿ ಗುಂಪುಗುಂಪಾಗಿ ಹುಟ್ಟುವುವು.

	ನೆರ್ವಾಲವನ್ನು ಬೀಜಗಳಿಂದ ಅಭಿವೃದ್ಧಿಪಡಿಸಲಾಗುತ್ತದೆ. ಇದರ ತೊಗಟೆ ಮತ್ತು ಎಲೆಗಳಿಗೆ ಶಕ್ತಿವರ್ಧಕ, ಜ್ವರನಿವಾರಕ, ಪಿತ್ತೋತ್ತೇಜಕ ಗುಣಗಳುಂಟು. ತೊಗಟೆಯ ಸಾರವನ್ನು ಹಸಿವನ್ನುಂಟುಮಾಡಲು ಬಳಸುವರು. ಇದು ರೇಚಕವೂ ಹೌದು. ನೆರ್ವಾಲದ ಮರದಿಂದ ಬಾಚಣಿಗೆ, ಬೆಂಕಿಕಡ್ಡಿ ತಯಾರಿಸುವುದಿದೆ.
(ಎಂ.ಎಚ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ